Dec 10, 2010

11 ಗಂಟೆಯ ಕಡೆಯ ಬಸ್ಸು

ಅವು ೨೦೦೦ ನೇ ಇಸವಿಯ ದಿನಗಳು, ಎಲ್ಲಾ ಕಡೆ ಮಿಲೇನಿಯಂ ಸೆಲೆಬ್ರೇಶನ್, ಅಂದಿನ ಯುವಕರಿಗಂತೂ ಎರಡು ಶತಮಾನದ ಬದಲಾವಣೆಗೆ ಸಾಕ್ಷಿಯಾದ ಉತ್ಸಾಹ. ಎಲ್ಲಿ ನೋಡಿದರು ಮಿಲೇನಿಯಂ ಗ್ರೀಟಿಂಗ್ಸ್ , ಮಿಲೇನಿಯಂ ಅಂಗಡಿ, ಅದು ಇದು ಎಲ್ಲದರಲ್ಲೂ ಮಿಲೇನಿಯಂ ಅನಿವಾರ್ಯವೇನೋ ಎಂಬಂತೆ ಸೇರಿಕೊಂಡು ಬಿಟ್ಟಿತ್ತು. ಈ ಮಿಲೇನಿಯಂ ಜ್ವರ ಕನ್ನಡ ರಾಜ್ಯೋತ್ಸವವನ್ನು ಬಿಟ್ಟಿರಲಿಲ್ಲ, ನವೆಂಬರ್ ತಿಂಗಳು ಯಾವ ಗಲ್ಲಿಯಲ್ಲಿ ನೋಡಿದರು ರಾಜ್ಯೋತ್ಸವಗಳು.
” ಹೊಯ್ಸಳ ಯುವಕರ ಸಂಘ – ಮಿಲೇನಿಯಂ ವರ್ಷದ ರಾಜ್ಯೋತ್ಸವ”
” ಕಾವೇರಿ ಕನ್ನಡ ಸಂಘ – ಮಿಲೇನಿಯಂ ವರ್ಷದ ರಾಜ್ಯೋತ್ಸವ”
ಆ ದಿನಗಳಲ್ಲಿ ಮಿಲೇನಿಯಂ ಪದಕ್ಕೆ ಸಮಾನಂತರ ಪದ ನನಗೆ ತಿಳಿದಿರಲಿಲ್ಲ, ಇದೆ ಮಿಲೇನಿಯಂ ಸಂದರ್ಭದಲ್ಲಿ ಕಂಪ್ಯೂಟರ್ ವಲಯದಲ್ಲಿ Y2K ಎಂಬ ಪದ ಎಷ್ಟು ಗದ್ದಲ ಮಾಡಿತ್ತು ಎಂಬುದೀಗ ಇತಿಹಾಸ.
——————————————**————————-
ಇಂತ ಮಿಲೇನಿಯಂ ದಿನಗಳಲ್ಲಿ ನಾ ಕಂಡ ಒಬ್ಬ ಅದ್ಭುತ ಕನ್ನಡ ಪ್ರೇಮಿಯ ಬಗ್ಗೆ ಹೇಳಬೇಕೆನಿಸುತ್ತಿದೆ.
ಇದೆ ಮಿಲೇನಿಯಂ ಸಂದರ್ಭದಲ್ಲಿ ನಾನು ಮತ್ತು ನನ್ನ ಗೆಳೆಯರು ಬದುಕನ್ನು ಹರಸುತ್ತ ಬೆಂಗಳೂರು ಸೇರಿದ್ದೆವು, ಕೆಲಸ ಮತ್ತು ನೆಲೆ ಕಂಡುಕೊಳ್ಳಲು ಹೆಣಗುತ್ತಿದ್ದ ದಿನಗಳು. ತಾತ್ಕಾಲಿಕವಾಗಿ ನಾನು ನನ್ನ ವಿಜಯನಗರದ ಮಾವನ ಮನೆಯಲ್ಲಿ ಹಂಡುರಿದ್ದೆ. ನನ್ನ ಇತರೆ ಸ್ನೇಹಿತರೆಲ್ಲ ಸೇರಿ ಮಲ್ಲೇಶ್ವರದಲ್ಲಿ ಮನೆ ಮಾಡಿಕೊಂಡಿದ್ದರು, ನಮ್ಮ ದಿನಚರಿ ಹೆಚ್ಚು ಕಮ್ಮಿ ಒಂದೇ ರೀತಿಯದಾಗಿತ್ತು. ಬೆಳಿಗ್ಗೆ ೮.೩೦ ಕ್ಕೆ ನನ್ನ ಗೆಳೆಯರೆಲ್ಲ ಸೇರಿದ ನಂತರ ದಿನದ ದಿನಚರಿ ನಿಗದಿಯಾಗುತ್ತಿತ್ತು, ದಿನಚರಿಯೇನು ಮಣ್ಣಗಟ್ಟಿ ಆ ದಿನ ಯಾವುದೇ ಕಂಪನಿಯಲ್ಲಿ walk in interview ಇದ್ದರು ನಮ್ಮೆಲ್ಲರ ಹಾಜರಿ ಗ್ಯಾರಂಟಿ.
ಸಾಯಂಕಾಲ ಇಡೀ ಮಲ್ಲೇಶ್ವರ ಒಂದು ರೌಂಡ್ ವಾಕಿಂಗ್, ಅಲ್ಲಿ ಓಡಾಡುವ ಹರೆಯದ ಹುಡುಗಿಯರನ್ನು ನೋಡಿ ನಮ್ಮೂರಲ್ಲಿ ಯಾಕೆ ಹುಡುಗಿಯರು ಇಷ್ಟು ಚೆನ್ನಾಗಿರಲ್ಲ ಅಂತ ತಲೆಗೆ ಹುಳ ಬಿಟ್ಕೊಂಡು ಮನೆಗೆ ವಾಪಸ್ಸಾಗಿ ಸೀಮೆ ಎಣ್ಣೆ ಸ್ಟೋವ್ ಗೆ ಪಂಪ್ ಹೊಡೆದು ಅಕ್ಕಿ ತೊಳೆದು ಅನ್ನಕ್ಕಿಟ್ಟು ಗಣೇಶ್ ದರ್ಶನನಲ್ಲಿ ಸಾಂಬಾರ್ ಪಾರ್ಸಲ್ ತಂದು ಊಟ ಮುಗಿಸದರೆ ಆಲ್ಮೋಸ್ಟ್ ಅವತ್ತಿನ್ನ ದಿನಚರಿ ಮುಗಿದಂತೆಯೇ , ಆದರೆ ನನ್ನೊಬ್ಬನ ದಿನಚರಿ ಮಾತ್ರ ಮುಗಿದಿರಲಿಲ್ಲ, ನಾ ಅಲ್ಲಿಂದ ಮತ್ತೆ ವಿಜಯನಗರಕ್ಕೆ ತೆರಳಬೇಕಿತ್ತು , ಮೆಜೆಸ್ಟಿಕ್
ತಲುಪುವ ವೇಳೆಗಾಗಲೇ ಸಮಯ ರಾತ್ರಿ ೧೦.೩೦.
ಪ್ಲಾಟ್ ಫಾರ್ಮ್ ೨ ರಲ್ಲಿ ನನ್ನಂತೆ ಕಡೆ ಬಸ್ಸಿಗೆ ಕಾಯುವ ಬಹಳಷ್ಟು ಮಂದಿ ಇರುತ್ತಿದ್ದರು.
ನನ್ನಂತೆ ನೆಲೆ ಇಲ್ಲದ ಕೆಲವರು, ಓ.ಟಿ. ಮುಗಿಸಿ ಮನೆ ತಲುಪುವ ಕಾರ್ಮಿಕರು, ವ್ಯಾಪಾರಿಗಳು , ಊರಿಂದ ಬಸ್ಸು ಮತ್ತು ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು. ಅ ದಿನಗಳಲ್ಲಿ ವಿಜಯನಗರಕ್ಕೆ ೧೧.೦೦ ಗಂಟೆ ಬಸ್ಸೇ ಕಡೆಯದು. ಆ ಬಸ್ಸು ಒಂದೇ ಒಂದು ದಿನವು ಖಾಲಿ ಹೋಗಿದ್ದೆ ನಾನು ನೋಡಿಲ್ಲ. ಸಂತೋಷ, ದುಗುಡ, ದುಮ್ಮಾನ ಮತ್ತು ಏಕತಾನತೆಯಿಂದ ಕೂಡಿದ ಇವರೆಲ್ಲರ ಮನಸ್ಸುಗಳು ಬಸ್ಸಿನ ಅರ್ಧ ಗಂಟೆ ಪಯಣದಲ್ಲಿ ಎಲ್ಲವನ್ನು ಮರೆಯುತ್ತಿದ್ದರು.
ಅದಕ್ಕೆ ಕಾರಣ ೧೧.೦೦ ಗಂಟೆಯ ಕಡೆ ಬಸ್ಸಿನ ನಿರ್ವಾಹಕ ( ಹೆಸರು ಮರೆತಿರುವೆ), ಈ ಮನುಷ್ಯನಲ್ಲಿ ಅಷ್ಟೊಂದು ವಿಶೇಷವೇನು ಅಂತೀರ, ಅದು ನಿರ್ವಾಹಕನಲ್ಲಿದ್ದ ಕನ್ನಡ ಪ್ರೇಮ , ಸರಿ ಸುಮಾರು ಒಂದು ವರ್ಷ ಪ್ರತಿ ದಿನ ಅದೇ ಬಸ್ಸಿನಲ್ಲಿ ಪ್ರಯಾಣಿಸಿದ್ದೇನೆ, ತಪ್ಪಿಯೂ ಆ ನಿರ್ವಾಹಕನ ಬಾಯಿಂದ ಕನ್ನಡ ಬಿಟ್ಟು ಬೇರೊಂದು ಬಾಷೆಯ ಪದ ಬಳಸಿದ್ದನ್ನು ನಾನು ಕೇಳಿಲ್ಲ, ಸಂಬಾಷಣೆಯ ಕೆಲವು ಜಲಕ್ ಇಲ್ಲಿವೆ ನೋಡಿ.
ಪ್ರಯಾಣಿಕರೆ ಚೀಟಿ ತಗೊಳ್ಳಿ ( ಟಿಕೆಟ್ ತಗೊಳ್ಳಿ ).
ದಯವಿಟ್ಟು ಚಿಲ್ಲರೆ ಕೊಟ್ಟು ಸಹಕರಿಸಿ.
ಓ ಚಾಲಕರೇ ಹೊರಡಿ.( ರೈಟ್ )
ಮಾಗಡಿ ರಸ್ತೆಯ ಎಂಟನೆ ತಿರುವು ಇಳಿಯುವ ಪ್ರಯಾಣಿಕರು ಬಾಗಿಲ ಬಳಿ ಬನ್ನಿ.
ಓ ಚಾಲಕರೇ ನಿಲ್ಲಿಸಿ ( holdane )
ಓ ಚಾಲಕರೇ ಹೊರಡಿ
ಪ್ರಸನ್ನ ಚಿತ್ರಮಂದಿರ ಇಳಿಯುವ ಪ್ರಯಾಣಿಕರು ಬಾಗಿಲ ಬಳಿ ಬನ್ನಿ
ಚಾಲಕರೇ ನಿಲ್ಲಿಸಿ.
ಇವು ಕೆಲವು ಜಲಕ್ ಗಳು, ಇವು ಬಸ್ಸಿನಲ್ಲಿದ್ದ ಕೆಲವರಿಗೆ ಹಾಸ್ಯಾಸ್ಪದವಾಗಿ ಕಂಡರೂ, ದಿನವು ಅದೇ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಏನಾದರೂ ಮಾಡಿ ಈ ವ್ಯಕ್ತಿಯ ಬಾಯಲ್ಲಿ ಕನ್ನಡವಲ್ಲದ ಪದ ಮಾತನಾಡಿಸಬೇಕೆಂಬ ಹಠ. ಕೊನೆಗೂ ಅವರ ಹಠ ಸೋತು ಅದೇ ಪ್ರಯಾಣಿಕರು ನಿರ್ವಾಹಕನೊಂದಿಗೆ ಸಹಕರಿಸಿದ್ದನ್ನು ನೋಡಿದ್ದೇನೆ ಮತ್ತು ಆ ಬದಲಾವಣೆಯನ್ನು ಕಂಡು ಬೆರಗಾಗಿದ್ದೇನೆ. ದಿನವು ಅದೇ ಬಸ್ಸಿನಲ್ಲಿ ಪ್ರಯಾಣಿಸುವರ ಮಾತುಗಳು ಬದಲಾವಣೆಯ ನಂತರ,
ನಿರ್ವಾಹಕರೆ ವಿಜಯನಗರಕ್ಕೆ ಒಂದು ಚೀಟಿ ಕೊಡಿ. ಓ ಚಾಲಕರೇ ನಿಲ್ಲಿ / ಓ ಚಾಲಕರೇ ಹೊರಡಿ – ನಿರ್ವಾಹಕನೊಂದಿಗೆ ಪ್ರಯಾಣಿಕರು ಧ್ವನಿಯಾಗುತ್ತಿದ್ದರು. ಈ ನಿರ್ವಾಹಕ ತನ್ನ ವೃತ್ತಿಯ ಜೊತೆಗೆ ಬೆಳೆಸಿಕೊಂಡ ಬಾಷಪ್ರೇಮ ನಿಜಕ್ಕೂ ಶ್ಲಾಘನೀಯ , ಇವತ್ತಿಗೂ ನಾನು ಊರಿಂದ ತಡವಾಗಿ ಬಂದರೆ ೧೧ ಗಂಟೆ ಬಸ್ಸು ಹತ್ತಿದರೆ ಕಣ್ಣುಗಳು ಆ ವ್ಯಕ್ತಿಯನ್ನು ಹುಡುಕುತ್ತವೆ.
—————————————**————————–
ಮೊನ್ನೆ ಭಾನುವಾರ ಮನೆಯ ಹತ್ತಿರದ ಮಾರ್ವಾಡಿ ಅಂಗಡಿ ಹತ್ತಿರ ಸೀಗರೆಟ್ ಸೇದುತ್ತ ಅಂಗಡಿಯವನೊಂದಿಗೆ ಹರಟೆ ಹೊಡೆಯುತ್ತಿರುವಾಗ, ಅಲ್ಲಿಗೆ ೧೦ ಜನರ ತಂಡವೊಂದು ಬಂದವರೇ ….ಹೇಯ್ ಸೇಟು ರಾಜ್ಯೋಸವ ಮಡ್ತಿದ್ದಿವಿ ಎಷ್ಟ್ ಬರಿಲಿ ಹೇಳು ಅಂತ ರಶೀದಿ ಪುಸ್ತಕ ತೆಗದರು, ಆ ಮಾರ್ವಾಡಿ ಏನೋ ಗೊಣಗಿಕೊಂಡು ೧೦೦ ರುಪಾಯಿ ಕೊಟ್ಟ, ನಮ್ಮ ಸರ್ಕಲ್ನಲ್ಲೇ ರಾಜ್ಯೋಸವ ಮಾಡ್ತಾ ಇರೋದು ನಿನ್ನ ಅಂಗಡಿಗೂ ಲೈಟ್ ಹಾಕಿಸ್ತಿವಿ ಮುಚ್ಕೊಂಡು ೧೦೦೦ ರುಪಾಯಿ ಕೊಡು ಅಂತ ಬೆದರಿಕೆ ಹಾಕಲು ಶುರುಮಾಡಿದರು, ಏನು ನಡೆಯುತ್ತೋ ನೋಡುವ ಅನ್ನೋ ಕುತೂಹಲದಿಂದ ನಾನು ಅಲ್ಲೇ ನಿಂತೇ ..
ನೋಡು ಸೇಟು ಕೊನೆದಾಗಿ ಹೇಳ್ತಾ ಇದ್ದಿವಿ ಈಗ್ಲೇ ಕೊಟ್ರೆ ೧೦೦೦ ಇಲ್ಲ ಅಂದ್ರೆ ಇನ್ ಒಂದ್ ಅವರ್ನಲ್ಲಿ ನಮ್ಮ ಅಧ್ಯಕ್ಷರು ಬತ್ತಾರೆ ಮುಲಾಜಿಲ್ದೆ ೫೦೦೦ ಬರಿತಾರೆ ಮುಚ್ಕೊಂಡ್ ಕೊಡಬೇಕಾಗುತ್ತೆ ಏನ್ಮಾಡ್ತಿಯ ಹೇಳು.
ಆ ಮರ್ವಾಡಿಗೆ ಏನ್ ಹೊಳಿತೋ ಏನೋ ಗೊತ್ತಿಲ್ಲ, ನೋಡ್ರಿ ನೀವು ಹತ್ತು ಜನ ಇದ್ದೀರಲ್ಲ ಯಾರಾದರು ಒಬ್ನೇ ಒಬ್ಬ ಕನ್ನಡ ರಾಜ್ಯೋತ್ಸವ ಅಂತ ಸರಿಯಾಗಿ ಹೇಳಿ ಈಗ್ಲೇ ೧೦೦೦ ರುಪಾಯಿ ತಗೊಂಡು ಹೋಗಿ ಅಂದ, ಅಷ್ಟು ಜನ ಪ್ರಯತ್ನ ಪಟ್ಟರು ಕನ್ನಡ ರಾಜ್ಯೋಸವ ಅಂತ ಬಂತೆ ಹೊರತು ಕನ್ನಡ ರಾಜ್ಯೋತ್ಸವ ಅನ್ನೋ ಸ್ಪಷ್ಟವಾದ ಉಚ್ಚಾರ ಒಬ್ಬನ್ನ ಬಾಯಿಂದಲೂ ಬರಲಿಲ್ಲ ……….ಆದ್ರೆ ಅವರ ಬಾಯಿಂದ ಬಂದ ಮಾತೇ ಬೇರೆ…….ಲೇ ಸೇಟು ನಿಂದ್ಯಾಕೋ ಜಾಸ್ತಿ ಆಯ್ತು , ಅಧ್ಯಕ್ಷರು ಬತ್ತಾರೆ ಅವ್ರ ತಾವೇ ಮಾತಾಡು. ಬಾರೋ ಮಚ್ಚಾ, ಈ ನನ್ನ ಮಕ್ಳು ಎಲ್ಲಿಂದಲೋ ಬಂದು ಇಲ್ಲಿ ವ್ಯಾಪಾರ ಮಾಡಿ ದೊಡ್ದವರಾಗ್ತಾರೆ, ನಮ್ಮ ಜಾಗ, ನಮ್ಮ ನೀರು, ನಮ್ಮ ಗಾಳಿ , ಆದ್ರೆ ನಮ್ಮ ರಾಜ್ಯೋಸವ ಕ್ಕೆ ಮಾತ್ರ ದುಡ್ಡು ಕೊಡಲ್ಲ ಅನ್ತಾರೆ, ಇವರಿಗೆಲ್ಲ ಟೈಮ್ ನೋಡ್ಕೊಂಡು ಸರಿಯಾಗಿ ಮಾಂಜಾ ಕೊಡ್ಬೇಕು ಮಗ.
—————————————**——————————
ಈ ಸುಸಂದರ್ಭದಲ್ಲಿ ತಟ್ಟನೆ ನೆನಪಾದುದು ೧೧ ಗಂಟೆ ಕಡೆ ಬಸ್ಸಿನ ನಿರ್ವಾಹಕ ವೃತ್ತಿಯ ಜೊತೆಗೆ ಬಾಷೆಯನ್ನು ಪ್ರೀತಿಸಿ ಬೆಳೆಸುತ್ತಿರುವ ಇಂತವರು ಒಂದು ಕಡೆ , ರಾಜ್ಯೋತ್ಸವಎಂದು ಸರಿಯಾಗಿ ಹೇಳಲು ಬರದೆ ಧಮಕಿ ಹಾಕುವವರು ಇನ್ನೊಂದು ಕಡೆ.
ಅಯ್ಯ ಪುಣ್ಯಾತ್ಮ ನಿರ್ವಾಹಕನೆ ನಿಮ್ಮ ಬಾಷ ಪ್ರೇಮಕ್ಕೆ , ಇಗೋ ನನ್ನ ಕೋಟಿ ಕೋಟಿ ವಂದನೆ, ನೀವು ಎಲ್ಲೇ ಇರಿ , ಹೇಗೆ ಇರಿ, ಎಂದಿಗೂ ನೀ ಕನ್ನಡವೇ ಆಗಿರು ಬೇರೆಯವರಿಗೆ ಕಲಿಸುತ್ತಿರು , ಬಾಷೆಯನ್ನು ಬೆಳೆಸುತ್ತಿರು.
ಮತ್ತೊಮ್ಮೆ ಸಿಗುವ ೧೧ ಗಂಟೆಯ ಕಡೆ ಬಸ್ಸಿನಲ್ಲಿ.
” ಜೈ ಭುವನೇಶ್ವರಿ “

No comments:

Post a Comment