Jan 7, 2011

ಹೆಜ್ಜೆಯ ಗುರುತಿಗೆ ಜೀವ ಬಂದಿದೆ

ಹೆಜ್ಜೆಯ ಗುರುತಿಗೆ ಜೀವ ಬಂದಿದೆ
ಗೆಜ್ಜೆ ಕಟ್ಟಿ ಕುಣಿಯುತ್ತಿದೆ
ಧಿಮ್ ತಕ ತಕಧಿಂ

ಮನಸ್ಸಿನ ಮೈದಾನ
ನೆನಪುಗಳ ಕೆಂಡದುಂಡೆ
ಉಚ್ವಾಸ ನಿಚ್ವಾಸ
ಅಬೇಯಾಡುತ್ತಿವೆ

ಕುಣಿತ ಮೀರಿದೆ
ಖಾಂಡವಾಗ್ನಿಯಾಗಿದೆ
ಪಕ್ಷಿಗಳ ಮೊರೆ ಕೇಳಿದೆ
ನನ್ನ ಮೊರೆ ದಿಕ್ಕರಿಸಿದೆ

ಮರೆತ ನೆನಪುಗಳು
ಧಿಗ್ಗನೆ ಉರಿಯುತ್ತಿವೆ
ವರುಣ ಕರುಣೆಯ
ಪದ ಮರೆತಿದ್ದಾನೆ
ಕಡು ವೈರಿ ಅಗ್ನಿಯ
ಜೊತೆಗೂಡಿದ್ದಾನೆ

Dec 30, 2010

ಹುಡುಕಾಟ

ಬೈಗಿಗೆ ಬಿದ್ದ ಬೈರಾಗಿ
ಹಗಲ ಮರೆತಿರುವನು
ಬೆಳಕ ಹುಡುಕುತ್ತಿರುವನು.

ಹಗಲು ನಶ್ವರ
ಬೆಳಕು ಈಶ್ವರ
ಭವ ಭಂದ ನಿರರ್ಥಕ
ಬೈಗಲ್ಲಿ ಬೆಳಕ ಹುಡುಕುತ್ತಿರುವನು.

ಹಗಲು ಬೆಳಕಲ್ಲ ಬೆಂಕಿ
ಬೆಳದಿಂಗಳು ಬೆಳಕಲ್ಲ ತಂಪು
ಹುಡುಕಾಟವೇನು
ಬಾಹ್ಯ ಬೆಳಕೇ, ತಂಪೇ
ಅಂತರಂಗದ ಕತ್ತಲೆಗೆ ಹಣತೆಯೇ.

Dec 27, 2010

ನಿಲುವು

ಉಬ್ಬು ತಗ್ಗು
ಜೀವನದ್ದೋ
ದೇಹದ್ದೋ
ನಡೆವ ದಾರಿಯದ್ದೋ.


ಕರಿಯ ಬಣ್ಣ, ಬಿಳಿಯ ಬಣ್ಣ
ಚರ್ಮ ಬಣ್ಣ
ಅಂಧಕಾರ, ಬೆಳದಿಂಗಳು
ಬಾಳ ಬಿಂದು, ಶೂನ್ಯ.


ಕೆಂಬಣ್ಣ, ನೆತ್ತರು
ಸೂರ್ಯೋದಯ , ಸೂರ್ಯಾಸ್ತ
ಕ್ರಾಂತಿ, ಮಣ್ಣು ಮಸಿ
ಬೆಂದ ಬದುಕು.


ಹಾಲಂತೆ
ಬಿಳಿಯೇ , ಹಳದಿಯೇ
ಬದುಕೇ, ಬಯಕೆಯೇ
ಬಟಾ ಬಯಲಿನ
ಬಿಟ್ಟಿ ಹುಟ್ಟು.


ಕರ್ಣನ ಮೋಹ
ಭಾನುಮತಿಗೋ, ದ್ರೌಪದಿಗೋ
ಕುಂತಿಗೋ ಅಥವಾ
ಕೊಲ್ಲಿಸಿದ ಕೃಷ್ಣನಿಗೋ.


ಹುಚ್ಚು ನದಿಗೂ ಬಣ್ಣದ ಮೋಹವೇ
ಮಳೆ ಬಂದರೆ ಕೆಂಬಣ್ಣ
ಇಲ್ಲವೇ ತಿಳಿ , ನಿರಾಳ
ತೊಟ್ಟಿಲಿನ ನಗೆ.

Dec 14, 2010

ಕವಿತೆ / ಪದ್ಯ - ಸರ್ವಕಾಲಿನವೇ

ತೊಟ್ಟಿಲ ಹೊತ್ಕೊಂಡು 
ತವರ ಬಣ್ಣ ಉಟ್ಕೊಂಡು 
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು 
ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ.
ಈ ಪದ್ಯವನ್ನು ಸುಮ್ಮನೆ ಒಮ್ಮೆ ಓದಿಕೊಳ್ಳಿ, ಕವಿಯ ಭಾವನೆಗಳು ಸರ್ವಕಾಲಿನವಾಗುವುದು ಇಲ್ಲಿಯೇ. ಒಂದು ವಾದವಿದೆ ಪದ್ಯಗಳು ಸರ್ವಕಾಲಿನವಾಗಿರಬೇಕು, ಹಾಗೆ ಬರೆಯುವುದು ತುಂಬಾನೇ ಕಷ್ಟ, ಆದರೆ ಕವಿತೆ ಕೊಡುವ ಭಾವವನ್ನು ಸರ್ವಕಾಲಿನ ಮಾಡಬಹುದೇನೋ, ಮೇಲಿನ ಸಾಲುಗಳನ್ನೇ ನೋಡಿ ಪ್ರಸ್ತುತ ತೊಟ್ಟಿಲು ಇಲ್ಲ , ತಿಟ್ಟನ್ನು ಹತ್ತುವುದು ಇಲ್ಲ , ಸಾಮಾನ್ಯವಾಗಿ ಬಸ್ಸಲ್ಲೋ , ಕಾರಲ್ಲೋ ಅಥವಾ ಬೈಕಲ್ಲೋ ಹೋಗುತ್ತಾರೆ. ಇಲ್ಲಿ ಕವಿಯ ಭಾವಾರ್ಥವನ್ನು ಗಮನಿಸಿ..
ಮಗಳು ಹೆರಿಗೆಗೆ ತವರಿಗೆ ಬಂದಿದ್ದಾಳೆ, ಎಲ್ಲವು ಸುಸೂತ್ರವಾಗಿ ನೆಡೆದು ಮತ್ತೆ ಗಂಡನ ಮನೆಗೆ ಹೊರಟು ನಿಂತಿದ್ದಾಳೆ, ಹಾಲು ತುಪ್ಪ ಉಂಡು ಮಗಳು ಮತ್ತು ಮೊಮ್ಮಗು ಸುಖವಾಗಿರಲೆಂದು ಅಪ್ಪ ಒಂದು ಎಮ್ಮೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ, ಹೊರಡುವ ದಿನಕ್ಕೆ ಮಗಳಿಗೆ ಹೊಸ ಸೀರೆ ಕೊಡಿಸಿದ್ದಾನೆ ( ತವರು ಬಣ್ಣ  ಉಟ್ಕೊಂಡು) ಇವೆಲ್ಲವುಗಳ ಜೊತೆ ನಡೆದ ಮಗಳು ತವರನ್ನು ತೊರೆಯುವ
ದುಃಖದಲ್ಲಿದ್ದಾಳೆ , ದಿಬ್ಬ ಹತ್ತಿ ಇಳಿದರೆ ಗಂಡನ ಮನೆ, ದಿಬ್ಬದ ತುದಿಯಲ್ಲಿ ನಿಂತು ಪ್ರೀತಿಯಿಂದ ಕಣ್ಣಿರಾಗಿ ತವರಿನ ಮನೆ ಕಡೆಗೊಮ್ಮೆ ನೋಡುತ್ತಾಳೆ ಮತ್ತು ಹರಸುತ್ತಾಳೆ (ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ). ಈ ಪದ್ಯ ಎಷ್ಟು ಹಳೆಯದೋ ಗೊತ್ತಿಲ್ಲ, ಆದರೆ ಕವಿಯ ಭಾವಾರ್ಥ ಎಷ್ಟು ಸರ್ವಕಾಲಿನ ಎಂಬುದನ್ನು ಗಮನಿಸಿ. ಇವತ್ತಿನ ಮತ್ತು ಯಾವತ್ತಿನ ಹೆಣ್ಣು ಮಕ್ಕಳಿಗೆ ತವರಿನ ಬಗ್ಗೆ ವ್ಯಾಮೋಹ ಮತ್ತು ಮಮಕಾರ ಸ್ವಲ್ಪ ಜಾಸ್ತಿಯೇ.
ಇವತ್ತಿನ ಕಾಲದಲ್ಲಿ ಹೆರಿಗೆಗೆ ಬಂದ ಮಗಳಿಗೆ ಅಪ್ಪ ಎಮ್ಮೆ ಕೊಡದೆ ಇರಬಹುದು, ಆದರೆ ಮಗಳು ಮತ್ತು ಮಮ್ಮೊಗು ತಿಂದುಂಡು ಆರೋಗ್ಯವಾಗಿರಲೆಂದು ಹರಸುತ್ತಾನೆ, ಇವತ್ತು ತಿಟ್ಟಿನ ಕೆಳಗೆ ಗಂಡನ ಮನೆಯಿಲ್ಲ ನೂರಾರು ಸಾವಿರಾರು ಮೈಲಿ ದೂರ, ಆದರು ತವರಿನಿಂದ ಹೊರಟ ಮಗಳು ಬಸ್ಸಿನಲ್ಲೋ, ಕಾರಿನಲ್ಲೋ ಅಥವಾ ರೈಲಿನಲ್ಲೋ ಕುಳಿತು ಕೊನೆಯ ನಿಮಿಷದಲ್ಲಿ ಕಣ್ಣಿರಾಗುತ್ತಾಳೆ ಮತ್ತು ಕಣ್ಣು ಹಾಯುವವರೆಗೂ ಕೈ ಬಿಸುತ್ತಲೋ ಅವರನ್ನೇ ನೋಡುತ್ತಾಳೆ.
ಹಾಗಾದರೆ ಮೇಲಿನ ಪದ್ಯ ಸರ್ವಕಾಲಿಕವೇ ? ಅಥವಾ ಪದ್ಯದ ಭಾವಾರ್ಥ ಸರ್ವಕಾಲಿಕವೇ.

ಕೆ.ಎಸ್.ಏನ್ ರವರ  ಈ ಕೆಳಗಿನ ಸಾಲುಗಳನ್ನು ಒಮ್ಮೆ ಓದಿಕೊಳ್ಳಿ 
ಮೊದಲ ದಿನ ಮೌನ 
ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ.....
ಈಗಿನ ಹುಡುಗಿಯರನ್ನು ಕೇಳಿ ನೋಡಿ, ಮೌನವು ಇಲ್ಲ ಮಣ್ಣು ಇಲ್ಲ ಮದುವೆಗೆ ಮುಂಚೆಯೇ ಮೊಬೈಲ್ ನಲ್ಲಿ ಬೇಕಾದಷ್ಟು ಮತಾಡಿದ್ದಿವಿ, ಹರಟಿದ್ದಿವಿ, ಸಿನೆಮಾ ನೋಡಿದ್ದೀವಿ, ಪಾರ್ಕ್ ನಲ್ಲಿ ಕೂತು ಐಸ್ ಕ್ರೀಂ ತಿಂದಿದ್ದೀವಿ ಮೌನ ಎಲ್ಲಿಂದ ಬಂತು ...ಅಂತದೆಲ್ಲ ಏನು ಇಲ್ಲ ಅನ್ತಾರೆ, (ಅಂದರೆ   ಕೆ.ಎಸ್.ಏನ್ ರವರ ಈ ಕವಿತೆ ಇವತ್ತಿನ ಯುವಕರಿಗೆ ಪುಳಕ ಉಂಟು ಮಾಡುವಲ್ಲಿ ಸೋತಿತೆ. ಖಂಡಿತ ಇಲ್ಲ )
ಹೌದು ಒಪ್ಪೋಣ ಇವೆಲ್ಲವಕ್ಕೂ ಮುಂಚೆ ನಿಮ್ಮ ಮೊದಲ ಭೇಟಿ ಮೌನವಾಗಿರಲ್ಲಿಲವೇ, ಒಂದಷ್ಟು ಪಿಸುಮಾತು, ಒಂದಷ್ಟು ಕಂಪನ, ಮುಜುಗರ, ಪುಳಕ ಇವೆಲ್ಲವನ್ನೂ ಅನುಭವಿಸಿದ ಮೇಲೆ ತಾನೇ ಮೊಬೈಲಿನಲ್ಲಿ ಹರಟೆ ಮತ್ತೊಂದು ಶುರುವಾದುದು.
ಹಾಗಾದರೆ ಪದ್ಯ / ಕವಿತೆ  ಅಥವಾ ಅದರ ಭಾವಾರ್ಥ ಸರ್ವಕಾಲಿನವಾಗಿರಬೇಕೆ ?.

ಇದಕ್ಕೆ ವಿರುದ್ಧವಾಗಿ ಇಲ್ಲಷ್ಟು ಅಂಶಗಳಿವೆ ನೋಡಿ

ಸಿದ್ದಲಿಂಗಯ್ಯ ನವರ ಈ ಕೆಳಗಿನ ಸಾಲುಗಳನ್ನು ಒಮ್ಮೆ ಓದಿಕೊಳ್ಳಿ.

ದಲಿತರು ಬಂದರು ದಾರಿ ಬಿಡಿ 
ದಲಿತರ ಕೈಗೆ ರಾಜ್ಯ ಕೊಡಿ 
ಬೆಳಗಾಯಿತು ಬಡವರಿಗೆ.
ಈ ಸಾಲುಗಳು ಅವರ ಹೋರಾಟದ ದಿನಗಳಲ್ಲಿ ಹುಟ್ಟಿದವು, ಹೋರಾಟ ಮುಗಿದ ಮೇಲೆ ಈ ಪದ್ಯಗಳಿಗೆ ಅರ್ಥವೇನು, ಈ ಪದ್ಯ ಹುಟ್ಟುವಾಗಿನ ಸನ್ನಿವೇಶ ನೆನಪು ಮಾಡಿಕೊಳ್ಳಿ, ಅವು ಹೋರಾಟದ ದಿನಗಳು, ಬಹಳ ಸಂದಿಗ್ದ ಕಾಲ, ಹೊರಗಿನವರೊಡನೆ ಹೋರಾಡಬಹುದು , ಆದರೆ ಇವರ ಹೋರಾಟ ಒಳಗಿನವರ ಜೊತೆಯಾಗಿತ್ತು ತನ್ನದೇ ಜನಗಳ ಜೊತೆ ಹಕ್ಕಿನ ಹೋರಾಟವಾಗಿತ್ತು.

ಇದೆ ಕವಿಯ ಮತ್ತೊಂದು ಕವಿತೆ  ನೋಡಿ 

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ 
ಸುಳಿದಾಡಬೇಡ ಗೆಳತಿ 
ಸುಟ್ಟಾವು ಬೆಳ್ಳಿ ಕಿರಣ 

ಆಹಾ ಎಂತ ಅದ್ಭುತ ಕಲ್ಪನೆ, ಇವೆಲ್ಲದರ ನಡುವೆ ತಟ್ಟನೆ ನೆನಪಾಗುವುದು ಆಡಿಗರ ಕವಿತೆ 

ಕಟ್ಟುವೆವು ನಾವು ಹೊಸ ನಾಡೊಂದನ್ನು 
ರಸದ ಬೀಡೊಂದನ್ನು
ಬಿಸಿ ನೆತ್ತರು ಉಕ್ಕಿ ಆರಿ ಹೋಗುವ ಮುನ್ನ 
ಕಟ್ಟುವೆವು ನಾವು ಹೊಸ ನಾಡೊಂದನ್ನು 
ರಸದ ಬೀಡೊಂದನ್ನು

ಈಗಿನ ರಾಜಕೀಯ ದೊಂಬರಾಟವನ್ನು ನೋಡಿದರೆ ಆಡಿಗರ ಈ ಕವಿತೆ ಯುವಕರ ಮನಸ್ಸಿನಲ್ಲಿ ಸರ್ವಕಾಲಿನ.

" ನಿಮ್ಮೂರ ಬಂಡಿಯಲ್ಲಿ ನಮ್ಮೊರ ಬಿಟ್ಟಾಗ 
  ಓಡಿದುದು ದಾರಿ ಬೇಗ "

ಈ ಸಾಲುಗಳಿಗೆ ನೀವೇನ್ ಅಂತಿರಾ 


 

Dec 10, 2010

ಚಿ.ರಾ ………ಮತ್ತು ಚಿ.ಸೌ……………

ಹಿಂದಿನ ಋಷಿ ಮುನಿಗಳು ಶಾಪ ಕೊಟ್ಟ ಕಥೆಗಳು ನಮಗೆಲ್ಲ ಗೊತ್ತೇ ಇವೆ. ಶಾಪ ಕೊಡುವುದರಲ್ಲೇ ಆಗ್ರ ಪಂಕ್ತಿಯಲ್ಲಿದ್ದವರು ದುರ್ವಾಸ ಮತ್ತು ವಿಶ್ವಾಮಿತ್ರರು. ಇಬ್ಬರಿಗೂ ಭಯಂಕರ ಕೋಪ ಮತ್ತು ಭಲೇ ego ಪಾರ್ಟಿಗಳು.
ಗೌತಮರ ಶಾಪದಿಂದ ಅಹಲ್ಯೆ ಕಲ್ಲಾದಳು, ಶಾಪ ವಿಮೋಚನೆಯ ನಂತರ ಬದುಕಿನಲ್ಲಿ ಜಿಗುಪ್ಸೆ ಬಂದು ಸ್ವಯಂ ಪ್ರೇರಣೆಯಿಂದ ಮತ್ತೆ ಕಲ್ಲಾದಳು ಎಂಬುದನ್ನು ಮೊನ್ನೆಯಷ್ಟೆ ಓದಿದ್ದೇವೆ.
ನಮ್ಮ ಹಿರಿಯರು ಹೇಳುತ್ತಿದ್ದನ್ನು ಸ್ವಲ್ಪ ನೆನಪಿಸಿಕೊಳ್ಳೋಣ , ಕೆಟ್ಟದ್ದನ್ನು ನುಡಿಯಬೇಡ ಆಸ್ತು ದೇವತೆಗಳು ಆಕಾಶ ಮಾರ್ಗದಲ್ಲಿ ಆಸ್ತು ಎಂದು ಓಡಾಡುತ್ತಿರುತ್ತಾರೆ , ನೀನು ಹೇಳಿದ್ದಕ್ಕೆ ಅವರು ಆಸ್ತು ಅಂದರೆ ಆಮೇಲೆ ಅದೆಲ್ಲ ನಿಜವಾಗುತ್ತದೆ, ಹೌದೆ ??
ಒಂದ್ನಿಮ್ಷ ಬೇರೆ ತರ ಯೋಚನೆ ಮಾಡೋಣ ಈ ಎಲ್ಲಾ ಅದ್ಭುತವಾದ ಪವರ್ ಅಥವಾ ಶಕ್ತಿಗಳು ನಮ್ಮ ಕಲಿಯುಗದ ಜನರಿಗೆ ಸಿಕ್ಕಿದ್ದರೆ ಎನಾಗಬಹುದಿತ್ತು, ನಮ್ಮ ಮಕ್ಕಳೆಲ್ಲರೂ ಕತ್ತೆ , ನಾಯಿ , ಕುದುರೆ , ಜಿರಳೆ ಅಂತ ಬೈಯ್ಯುತ್ತಿರುತ್ತಾರೆ ಇವೆಲ್ಲಕ್ಕೂ ಆಸ್ತು ದೇವತೆಗಳು ಆಸ್ತು ಅಂದ್ಬಿಟ್ರೆ ಏನ್ರೀ ಗತಿ.
ಎಲ್ಲೋ ಓದಿದ ನೆನಪು ಮನುಷ್ಯ ಜನ್ಮವನ್ನು ಬೇಡಬಾರದು, ಮನುಜ ಜನ್ಮವೆಂಬುದು ಸೃಷ್ಟಿಯೊಳಗೆ ಅತೀ ಕೀಳು ಜನ್ಮ, ಎಷ್ಟು ಸತ್ಯವೋ ಗೊತ್ತಿಲ್ಲ ಆದರು ನಮ್ಮ ಹಿರಿಯರು ಆಶೀರ್ವಾದ ಮಾಡುವಾಗ ಈಗಲೂ ದೀರ್ಘ ಸುಮಂಗಲಿಭವ – ಎಷ್ಟು ವರ್ಷ ಸುಮಂಗಲಿಯಾಗಿರಬೇಕು, ಗಂಡ ಮತ್ತು ಆಕೆಯ ಮಧ್ಯೆ ವಯಸ್ಸಿನ ಅಂತರ ಸ್ವಲ್ಪ ಜಾಸ್ತಿ ಇದ್ದರೆ ಆ ಯಪ್ಪನ ಗತಿ ಅಷ್ಟೇ !
ಇನ್ನು ಹುಡುಗರಿಗೆ ದೀರ್ಘಾಯುಷ್ಮಾನ್ಭವ ಏನ್ರೀ ಈ ಆಶೀರ್ವಾದಗಳು, ಇನ್ನು ಸ್ವಲ್ಪ ಗೊಂದಲ ಉಂಟುಮಾಡುವವು ಇಲ್ಲಿವೆ ನೋಡಿ ಲಗ್ನಪತ್ರಿಕೆಯಲ್ಲಿ ಚಿ.ರಾ ……….ಮತ್ತು ಚಿ. ಸೌ …………. ಅಂದರೆ ಇಬ್ಬರು ಚಿರಂಜೀವಿಗಳು ಇವ ರಾಜಶೇಖರ ಮತ್ತು ಅವಳು ಸೌಭಾಗ್ಯವತಿ, ಅಂದರೆ ಇವಳು ಸಾಯುವವರೆಗೂ ಅವನು ಸಾಯುವ ಆಗಿಲ್ಲ , ಏನೇ ಬಂದರು ಸಹಿಸಿಕೊಳ್ಳಬೇಕು, ಸೌಭಾಗ್ಯವತಿ ಅನ್ನೋ ಆಶೀರ್ವಾದ ಫಲಿಸಿ ಅವಳೇ ಮೊದಲು ಮರಣ ಹೊಂದಿದರೆ ಆಕೆಗೆ ಮಾಡಿದ ಚಿರಂಜೀವಿ ಅನ್ನೋ ಆಶೀರ್ವಾದ ಸುಳ್ಳೇ. ಆದರು ಈ ಚಿರಂಜೀವಿಯಾಗುವುದು ಬೇಕೇ .
ಗಂಧರ್ವರಿಗೆ ನೂರಾರು ವರ್ಷಗಳಿಂದ ಯೌವನದಲ್ಲೇ ಇದ್ದು ಬೋರ್ ಆಗಿಲ್ವೆ , ಇವರ ಮೊಮ್ಮಕ್ಕಳು ಮದುವೆಯಾದರು ಇವರು ಯೌವನದಲ್ಲೇ ಇದ್ದರೆ ಹಾಸ್ಯಸ್ಪದವಲ್ಲವೇ, ಇವರು ನಿಸರ್ಗದತ್ತವಾಗಿ ನಡೆಯುವ ಬದುಕಿನ ಏರಿಳಿತಗಳ ಅನುಭವಗಳನ್ನು ಕಳೆದುಕೊಂಡರೆ.
” ಪರಂಪರೆ ಬಿಟ್ಟದ್ದು , ಅಂಧಶ್ರದ್ದೆ ಇಟ್ಟದ್ದು”
ಅಂದರೆ ಇವೆಲ್ಲ ಸುಳ್ಳೇ ?, ಇವೆಲ್ಲ ಕಥೆಗಳು ನಮ್ಮ ಪೂರ್ವಿಕರು ನಮಗೆ ಹೇಳಿದವಲ್ಲವೇ ಮತ್ತು ಅವರು ಬಿಟ್ಟು ಹೋದ ಪರಂಪರೆಯಲ್ಲವೇ.
“ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧುಬಳಗ” ಅನ್ನೋ ಕಾಲದಲ್ಲಿ ಬದುಕಿದ ನಮ್ಮ ಹಿರಿಯರು ನಮಗೆ ಸುಳ್ಳು ಹೇಳಿದರೆ.
ಗೊಂದಲವೋ ಗೊಂದಲ ???
ಏನೇ ಆಗಲಿ ನಿಮ್ಮೆಲ್ಲರಿಗೂ ನಂದು ಒಂದು ಆಶೀರ್ವಾದ ….
ಎಲ್ಲಾ ಗಂಡಸರಿಗೆ – ಚಿರಂಜೀವಿ ರಾಜಶೇಖರನಿಗೆ ದೀರ್ಘಾಯುಷ್ಮಾನ್ಭವ
ಎಲ್ಲಾ ಹೆಂಗಸರಿಗೆ – ಚಿರಂಜೀವಿ ಸೌಭಾಗ್ಯವತಿಗೆ ದೀರ್ಘಾಯುಷ್ಮಾನ್ಭವ

ನಾನೇ, ನನ್ನೊಳಗಿನ ನಾನೇ

ಯಾರು ಕಾರಣ
ನಾನೇ, ನನ್ನೊಳಗಿನ ನಾನೇ
ಅವಮಾನಗಳ ಕೆಂಡ ನುಂಗಿ
ಕೆಂಡ ಸುಡಲು
ಕಣ್ಣೀರಿಂದ ತೋಯಿಸಿ
ಜಗಕ್ಕೆ ನಗು ಮೊಗವ ತೋರಲು
ಯಾರು ಕಾರಣ
ನಾನೇ, ನನ್ನೊಳಗಿನ ನಾನೇ

ಬೇಡವೆಂದ ಒಂದು ಮನಸ್ಸು
ಬೇಕು ಎಂದು ರಚ್ಚೆ ಹಿಡಿಯುವ ಇನ್ನೊಂದು ಮನಸ್ಸು
ಇವೆರಡ ಮಧ್ಯೆ ನಿರ್ಧಾರ ಸತ್ತ ಹೆಣ
ಬೇಡ ಅಂದ ಮನಸ್ಸ ಹಟ್ಟಿಗಟ್ಟಿ
ಬೇಕು ಅಂದ ಮನಸ್ಸ ತೆಕ್ಕೆಗೆಳೆದು
ಸೂಳೆಯರು ನಾಚುವಂತೆ ಸಿಂಗಾರ ಮಾಡಿ
ಬೀದಿ ಅಲೆದಕ್ಕೆ, ಯಾರು ಕಾರಣ
ನಾನೇ, ನನ್ನೊಳಗಿನ ನಾನೇ

ಎಲ್ಲಾ ಸುಖವ ಬಾಚಿ ತಬ್ಬಿ
ಉಂಡು ಮಲಗಿ ತಿಂದು ತೇಗಿ
ನನ್ನ ನೀ ಮರೆತು
ನಿನ್ನ ನಾ ಮರೆತು
ಮರೆತು ಕುಂತು ಮೆರೆಯುವಾಗ
ಕೆಂಡದ ಬರೆಯಿಟ್ಟವರು ಯಾರು
ನಾನೇ, ನನ್ನೊಳಗಿನ ನಾನೇ

ಹಳೆಯ ಸುಖವ ಮರೆತು
ನಾಳೆ ಪಥವ ಮನದಿ ನೆನೆದು
ಎಲ್ಲವನ್ನು ಮೀರುವ ಬೀಜ ಬಿತ್ತಿ
ಕಳೆ ತೆಗೆದು, ಸೊಗಸಾದ ತೆನೆ ಬರುವಾಗ
ಸೂತಕದ ಹಚ್ಹಡ ಹೊದಿಸಿದವರು ಯಾರು
ನಾನೇ, ನನ್ನೊಳಗಿನ ನಾನೇ

11 ಗಂಟೆಯ ಕಡೆಯ ಬಸ್ಸು

ಅವು ೨೦೦೦ ನೇ ಇಸವಿಯ ದಿನಗಳು, ಎಲ್ಲಾ ಕಡೆ ಮಿಲೇನಿಯಂ ಸೆಲೆಬ್ರೇಶನ್, ಅಂದಿನ ಯುವಕರಿಗಂತೂ ಎರಡು ಶತಮಾನದ ಬದಲಾವಣೆಗೆ ಸಾಕ್ಷಿಯಾದ ಉತ್ಸಾಹ. ಎಲ್ಲಿ ನೋಡಿದರು ಮಿಲೇನಿಯಂ ಗ್ರೀಟಿಂಗ್ಸ್ , ಮಿಲೇನಿಯಂ ಅಂಗಡಿ, ಅದು ಇದು ಎಲ್ಲದರಲ್ಲೂ ಮಿಲೇನಿಯಂ ಅನಿವಾರ್ಯವೇನೋ ಎಂಬಂತೆ ಸೇರಿಕೊಂಡು ಬಿಟ್ಟಿತ್ತು. ಈ ಮಿಲೇನಿಯಂ ಜ್ವರ ಕನ್ನಡ ರಾಜ್ಯೋತ್ಸವವನ್ನು ಬಿಟ್ಟಿರಲಿಲ್ಲ, ನವೆಂಬರ್ ತಿಂಗಳು ಯಾವ ಗಲ್ಲಿಯಲ್ಲಿ ನೋಡಿದರು ರಾಜ್ಯೋತ್ಸವಗಳು.
” ಹೊಯ್ಸಳ ಯುವಕರ ಸಂಘ – ಮಿಲೇನಿಯಂ ವರ್ಷದ ರಾಜ್ಯೋತ್ಸವ”
” ಕಾವೇರಿ ಕನ್ನಡ ಸಂಘ – ಮಿಲೇನಿಯಂ ವರ್ಷದ ರಾಜ್ಯೋತ್ಸವ”
ಆ ದಿನಗಳಲ್ಲಿ ಮಿಲೇನಿಯಂ ಪದಕ್ಕೆ ಸಮಾನಂತರ ಪದ ನನಗೆ ತಿಳಿದಿರಲಿಲ್ಲ, ಇದೆ ಮಿಲೇನಿಯಂ ಸಂದರ್ಭದಲ್ಲಿ ಕಂಪ್ಯೂಟರ್ ವಲಯದಲ್ಲಿ Y2K ಎಂಬ ಪದ ಎಷ್ಟು ಗದ್ದಲ ಮಾಡಿತ್ತು ಎಂಬುದೀಗ ಇತಿಹಾಸ.
——————————————**————————-
ಇಂತ ಮಿಲೇನಿಯಂ ದಿನಗಳಲ್ಲಿ ನಾ ಕಂಡ ಒಬ್ಬ ಅದ್ಭುತ ಕನ್ನಡ ಪ್ರೇಮಿಯ ಬಗ್ಗೆ ಹೇಳಬೇಕೆನಿಸುತ್ತಿದೆ.
ಇದೆ ಮಿಲೇನಿಯಂ ಸಂದರ್ಭದಲ್ಲಿ ನಾನು ಮತ್ತು ನನ್ನ ಗೆಳೆಯರು ಬದುಕನ್ನು ಹರಸುತ್ತ ಬೆಂಗಳೂರು ಸೇರಿದ್ದೆವು, ಕೆಲಸ ಮತ್ತು ನೆಲೆ ಕಂಡುಕೊಳ್ಳಲು ಹೆಣಗುತ್ತಿದ್ದ ದಿನಗಳು. ತಾತ್ಕಾಲಿಕವಾಗಿ ನಾನು ನನ್ನ ವಿಜಯನಗರದ ಮಾವನ ಮನೆಯಲ್ಲಿ ಹಂಡುರಿದ್ದೆ. ನನ್ನ ಇತರೆ ಸ್ನೇಹಿತರೆಲ್ಲ ಸೇರಿ ಮಲ್ಲೇಶ್ವರದಲ್ಲಿ ಮನೆ ಮಾಡಿಕೊಂಡಿದ್ದರು, ನಮ್ಮ ದಿನಚರಿ ಹೆಚ್ಚು ಕಮ್ಮಿ ಒಂದೇ ರೀತಿಯದಾಗಿತ್ತು. ಬೆಳಿಗ್ಗೆ ೮.೩೦ ಕ್ಕೆ ನನ್ನ ಗೆಳೆಯರೆಲ್ಲ ಸೇರಿದ ನಂತರ ದಿನದ ದಿನಚರಿ ನಿಗದಿಯಾಗುತ್ತಿತ್ತು, ದಿನಚರಿಯೇನು ಮಣ್ಣಗಟ್ಟಿ ಆ ದಿನ ಯಾವುದೇ ಕಂಪನಿಯಲ್ಲಿ walk in interview ಇದ್ದರು ನಮ್ಮೆಲ್ಲರ ಹಾಜರಿ ಗ್ಯಾರಂಟಿ.
ಸಾಯಂಕಾಲ ಇಡೀ ಮಲ್ಲೇಶ್ವರ ಒಂದು ರೌಂಡ್ ವಾಕಿಂಗ್, ಅಲ್ಲಿ ಓಡಾಡುವ ಹರೆಯದ ಹುಡುಗಿಯರನ್ನು ನೋಡಿ ನಮ್ಮೂರಲ್ಲಿ ಯಾಕೆ ಹುಡುಗಿಯರು ಇಷ್ಟು ಚೆನ್ನಾಗಿರಲ್ಲ ಅಂತ ತಲೆಗೆ ಹುಳ ಬಿಟ್ಕೊಂಡು ಮನೆಗೆ ವಾಪಸ್ಸಾಗಿ ಸೀಮೆ ಎಣ್ಣೆ ಸ್ಟೋವ್ ಗೆ ಪಂಪ್ ಹೊಡೆದು ಅಕ್ಕಿ ತೊಳೆದು ಅನ್ನಕ್ಕಿಟ್ಟು ಗಣೇಶ್ ದರ್ಶನನಲ್ಲಿ ಸಾಂಬಾರ್ ಪಾರ್ಸಲ್ ತಂದು ಊಟ ಮುಗಿಸದರೆ ಆಲ್ಮೋಸ್ಟ್ ಅವತ್ತಿನ್ನ ದಿನಚರಿ ಮುಗಿದಂತೆಯೇ , ಆದರೆ ನನ್ನೊಬ್ಬನ ದಿನಚರಿ ಮಾತ್ರ ಮುಗಿದಿರಲಿಲ್ಲ, ನಾ ಅಲ್ಲಿಂದ ಮತ್ತೆ ವಿಜಯನಗರಕ್ಕೆ ತೆರಳಬೇಕಿತ್ತು , ಮೆಜೆಸ್ಟಿಕ್
ತಲುಪುವ ವೇಳೆಗಾಗಲೇ ಸಮಯ ರಾತ್ರಿ ೧೦.೩೦.
ಪ್ಲಾಟ್ ಫಾರ್ಮ್ ೨ ರಲ್ಲಿ ನನ್ನಂತೆ ಕಡೆ ಬಸ್ಸಿಗೆ ಕಾಯುವ ಬಹಳಷ್ಟು ಮಂದಿ ಇರುತ್ತಿದ್ದರು.
ನನ್ನಂತೆ ನೆಲೆ ಇಲ್ಲದ ಕೆಲವರು, ಓ.ಟಿ. ಮುಗಿಸಿ ಮನೆ ತಲುಪುವ ಕಾರ್ಮಿಕರು, ವ್ಯಾಪಾರಿಗಳು , ಊರಿಂದ ಬಸ್ಸು ಮತ್ತು ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು. ಅ ದಿನಗಳಲ್ಲಿ ವಿಜಯನಗರಕ್ಕೆ ೧೧.೦೦ ಗಂಟೆ ಬಸ್ಸೇ ಕಡೆಯದು. ಆ ಬಸ್ಸು ಒಂದೇ ಒಂದು ದಿನವು ಖಾಲಿ ಹೋಗಿದ್ದೆ ನಾನು ನೋಡಿಲ್ಲ. ಸಂತೋಷ, ದುಗುಡ, ದುಮ್ಮಾನ ಮತ್ತು ಏಕತಾನತೆಯಿಂದ ಕೂಡಿದ ಇವರೆಲ್ಲರ ಮನಸ್ಸುಗಳು ಬಸ್ಸಿನ ಅರ್ಧ ಗಂಟೆ ಪಯಣದಲ್ಲಿ ಎಲ್ಲವನ್ನು ಮರೆಯುತ್ತಿದ್ದರು.
ಅದಕ್ಕೆ ಕಾರಣ ೧೧.೦೦ ಗಂಟೆಯ ಕಡೆ ಬಸ್ಸಿನ ನಿರ್ವಾಹಕ ( ಹೆಸರು ಮರೆತಿರುವೆ), ಈ ಮನುಷ್ಯನಲ್ಲಿ ಅಷ್ಟೊಂದು ವಿಶೇಷವೇನು ಅಂತೀರ, ಅದು ನಿರ್ವಾಹಕನಲ್ಲಿದ್ದ ಕನ್ನಡ ಪ್ರೇಮ , ಸರಿ ಸುಮಾರು ಒಂದು ವರ್ಷ ಪ್ರತಿ ದಿನ ಅದೇ ಬಸ್ಸಿನಲ್ಲಿ ಪ್ರಯಾಣಿಸಿದ್ದೇನೆ, ತಪ್ಪಿಯೂ ಆ ನಿರ್ವಾಹಕನ ಬಾಯಿಂದ ಕನ್ನಡ ಬಿಟ್ಟು ಬೇರೊಂದು ಬಾಷೆಯ ಪದ ಬಳಸಿದ್ದನ್ನು ನಾನು ಕೇಳಿಲ್ಲ, ಸಂಬಾಷಣೆಯ ಕೆಲವು ಜಲಕ್ ಇಲ್ಲಿವೆ ನೋಡಿ.
ಪ್ರಯಾಣಿಕರೆ ಚೀಟಿ ತಗೊಳ್ಳಿ ( ಟಿಕೆಟ್ ತಗೊಳ್ಳಿ ).
ದಯವಿಟ್ಟು ಚಿಲ್ಲರೆ ಕೊಟ್ಟು ಸಹಕರಿಸಿ.
ಓ ಚಾಲಕರೇ ಹೊರಡಿ.( ರೈಟ್ )
ಮಾಗಡಿ ರಸ್ತೆಯ ಎಂಟನೆ ತಿರುವು ಇಳಿಯುವ ಪ್ರಯಾಣಿಕರು ಬಾಗಿಲ ಬಳಿ ಬನ್ನಿ.
ಓ ಚಾಲಕರೇ ನಿಲ್ಲಿಸಿ ( holdane )
ಓ ಚಾಲಕರೇ ಹೊರಡಿ
ಪ್ರಸನ್ನ ಚಿತ್ರಮಂದಿರ ಇಳಿಯುವ ಪ್ರಯಾಣಿಕರು ಬಾಗಿಲ ಬಳಿ ಬನ್ನಿ
ಚಾಲಕರೇ ನಿಲ್ಲಿಸಿ.
ಇವು ಕೆಲವು ಜಲಕ್ ಗಳು, ಇವು ಬಸ್ಸಿನಲ್ಲಿದ್ದ ಕೆಲವರಿಗೆ ಹಾಸ್ಯಾಸ್ಪದವಾಗಿ ಕಂಡರೂ, ದಿನವು ಅದೇ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಏನಾದರೂ ಮಾಡಿ ಈ ವ್ಯಕ್ತಿಯ ಬಾಯಲ್ಲಿ ಕನ್ನಡವಲ್ಲದ ಪದ ಮಾತನಾಡಿಸಬೇಕೆಂಬ ಹಠ. ಕೊನೆಗೂ ಅವರ ಹಠ ಸೋತು ಅದೇ ಪ್ರಯಾಣಿಕರು ನಿರ್ವಾಹಕನೊಂದಿಗೆ ಸಹಕರಿಸಿದ್ದನ್ನು ನೋಡಿದ್ದೇನೆ ಮತ್ತು ಆ ಬದಲಾವಣೆಯನ್ನು ಕಂಡು ಬೆರಗಾಗಿದ್ದೇನೆ. ದಿನವು ಅದೇ ಬಸ್ಸಿನಲ್ಲಿ ಪ್ರಯಾಣಿಸುವರ ಮಾತುಗಳು ಬದಲಾವಣೆಯ ನಂತರ,
ನಿರ್ವಾಹಕರೆ ವಿಜಯನಗರಕ್ಕೆ ಒಂದು ಚೀಟಿ ಕೊಡಿ. ಓ ಚಾಲಕರೇ ನಿಲ್ಲಿ / ಓ ಚಾಲಕರೇ ಹೊರಡಿ – ನಿರ್ವಾಹಕನೊಂದಿಗೆ ಪ್ರಯಾಣಿಕರು ಧ್ವನಿಯಾಗುತ್ತಿದ್ದರು. ಈ ನಿರ್ವಾಹಕ ತನ್ನ ವೃತ್ತಿಯ ಜೊತೆಗೆ ಬೆಳೆಸಿಕೊಂಡ ಬಾಷಪ್ರೇಮ ನಿಜಕ್ಕೂ ಶ್ಲಾಘನೀಯ , ಇವತ್ತಿಗೂ ನಾನು ಊರಿಂದ ತಡವಾಗಿ ಬಂದರೆ ೧೧ ಗಂಟೆ ಬಸ್ಸು ಹತ್ತಿದರೆ ಕಣ್ಣುಗಳು ಆ ವ್ಯಕ್ತಿಯನ್ನು ಹುಡುಕುತ್ತವೆ.
—————————————**————————–
ಮೊನ್ನೆ ಭಾನುವಾರ ಮನೆಯ ಹತ್ತಿರದ ಮಾರ್ವಾಡಿ ಅಂಗಡಿ ಹತ್ತಿರ ಸೀಗರೆಟ್ ಸೇದುತ್ತ ಅಂಗಡಿಯವನೊಂದಿಗೆ ಹರಟೆ ಹೊಡೆಯುತ್ತಿರುವಾಗ, ಅಲ್ಲಿಗೆ ೧೦ ಜನರ ತಂಡವೊಂದು ಬಂದವರೇ ….ಹೇಯ್ ಸೇಟು ರಾಜ್ಯೋಸವ ಮಡ್ತಿದ್ದಿವಿ ಎಷ್ಟ್ ಬರಿಲಿ ಹೇಳು ಅಂತ ರಶೀದಿ ಪುಸ್ತಕ ತೆಗದರು, ಆ ಮಾರ್ವಾಡಿ ಏನೋ ಗೊಣಗಿಕೊಂಡು ೧೦೦ ರುಪಾಯಿ ಕೊಟ್ಟ, ನಮ್ಮ ಸರ್ಕಲ್ನಲ್ಲೇ ರಾಜ್ಯೋಸವ ಮಾಡ್ತಾ ಇರೋದು ನಿನ್ನ ಅಂಗಡಿಗೂ ಲೈಟ್ ಹಾಕಿಸ್ತಿವಿ ಮುಚ್ಕೊಂಡು ೧೦೦೦ ರುಪಾಯಿ ಕೊಡು ಅಂತ ಬೆದರಿಕೆ ಹಾಕಲು ಶುರುಮಾಡಿದರು, ಏನು ನಡೆಯುತ್ತೋ ನೋಡುವ ಅನ್ನೋ ಕುತೂಹಲದಿಂದ ನಾನು ಅಲ್ಲೇ ನಿಂತೇ ..
ನೋಡು ಸೇಟು ಕೊನೆದಾಗಿ ಹೇಳ್ತಾ ಇದ್ದಿವಿ ಈಗ್ಲೇ ಕೊಟ್ರೆ ೧೦೦೦ ಇಲ್ಲ ಅಂದ್ರೆ ಇನ್ ಒಂದ್ ಅವರ್ನಲ್ಲಿ ನಮ್ಮ ಅಧ್ಯಕ್ಷರು ಬತ್ತಾರೆ ಮುಲಾಜಿಲ್ದೆ ೫೦೦೦ ಬರಿತಾರೆ ಮುಚ್ಕೊಂಡ್ ಕೊಡಬೇಕಾಗುತ್ತೆ ಏನ್ಮಾಡ್ತಿಯ ಹೇಳು.
ಆ ಮರ್ವಾಡಿಗೆ ಏನ್ ಹೊಳಿತೋ ಏನೋ ಗೊತ್ತಿಲ್ಲ, ನೋಡ್ರಿ ನೀವು ಹತ್ತು ಜನ ಇದ್ದೀರಲ್ಲ ಯಾರಾದರು ಒಬ್ನೇ ಒಬ್ಬ ಕನ್ನಡ ರಾಜ್ಯೋತ್ಸವ ಅಂತ ಸರಿಯಾಗಿ ಹೇಳಿ ಈಗ್ಲೇ ೧೦೦೦ ರುಪಾಯಿ ತಗೊಂಡು ಹೋಗಿ ಅಂದ, ಅಷ್ಟು ಜನ ಪ್ರಯತ್ನ ಪಟ್ಟರು ಕನ್ನಡ ರಾಜ್ಯೋಸವ ಅಂತ ಬಂತೆ ಹೊರತು ಕನ್ನಡ ರಾಜ್ಯೋತ್ಸವ ಅನ್ನೋ ಸ್ಪಷ್ಟವಾದ ಉಚ್ಚಾರ ಒಬ್ಬನ್ನ ಬಾಯಿಂದಲೂ ಬರಲಿಲ್ಲ ……….ಆದ್ರೆ ಅವರ ಬಾಯಿಂದ ಬಂದ ಮಾತೇ ಬೇರೆ…….ಲೇ ಸೇಟು ನಿಂದ್ಯಾಕೋ ಜಾಸ್ತಿ ಆಯ್ತು , ಅಧ್ಯಕ್ಷರು ಬತ್ತಾರೆ ಅವ್ರ ತಾವೇ ಮಾತಾಡು. ಬಾರೋ ಮಚ್ಚಾ, ಈ ನನ್ನ ಮಕ್ಳು ಎಲ್ಲಿಂದಲೋ ಬಂದು ಇಲ್ಲಿ ವ್ಯಾಪಾರ ಮಾಡಿ ದೊಡ್ದವರಾಗ್ತಾರೆ, ನಮ್ಮ ಜಾಗ, ನಮ್ಮ ನೀರು, ನಮ್ಮ ಗಾಳಿ , ಆದ್ರೆ ನಮ್ಮ ರಾಜ್ಯೋಸವ ಕ್ಕೆ ಮಾತ್ರ ದುಡ್ಡು ಕೊಡಲ್ಲ ಅನ್ತಾರೆ, ಇವರಿಗೆಲ್ಲ ಟೈಮ್ ನೋಡ್ಕೊಂಡು ಸರಿಯಾಗಿ ಮಾಂಜಾ ಕೊಡ್ಬೇಕು ಮಗ.
—————————————**——————————
ಈ ಸುಸಂದರ್ಭದಲ್ಲಿ ತಟ್ಟನೆ ನೆನಪಾದುದು ೧೧ ಗಂಟೆ ಕಡೆ ಬಸ್ಸಿನ ನಿರ್ವಾಹಕ ವೃತ್ತಿಯ ಜೊತೆಗೆ ಬಾಷೆಯನ್ನು ಪ್ರೀತಿಸಿ ಬೆಳೆಸುತ್ತಿರುವ ಇಂತವರು ಒಂದು ಕಡೆ , ರಾಜ್ಯೋತ್ಸವಎಂದು ಸರಿಯಾಗಿ ಹೇಳಲು ಬರದೆ ಧಮಕಿ ಹಾಕುವವರು ಇನ್ನೊಂದು ಕಡೆ.
ಅಯ್ಯ ಪುಣ್ಯಾತ್ಮ ನಿರ್ವಾಹಕನೆ ನಿಮ್ಮ ಬಾಷ ಪ್ರೇಮಕ್ಕೆ , ಇಗೋ ನನ್ನ ಕೋಟಿ ಕೋಟಿ ವಂದನೆ, ನೀವು ಎಲ್ಲೇ ಇರಿ , ಹೇಗೆ ಇರಿ, ಎಂದಿಗೂ ನೀ ಕನ್ನಡವೇ ಆಗಿರು ಬೇರೆಯವರಿಗೆ ಕಲಿಸುತ್ತಿರು , ಬಾಷೆಯನ್ನು ಬೆಳೆಸುತ್ತಿರು.
ಮತ್ತೊಮ್ಮೆ ಸಿಗುವ ೧೧ ಗಂಟೆಯ ಕಡೆ ಬಸ್ಸಿನಲ್ಲಿ.
” ಜೈ ಭುವನೇಶ್ವರಿ “

Aug 13, 2010

ಎಲ್ಲಾ ಮರೆತಿರುವೆನೆಂದು

ನನ್ನೊಂದಿಗಿಲ್ಲದ ನಿನಗೆ
ನನ್ನ ಕಳಕಳಿ ಏಕೆ
ಬದುಕುವೆನು ಬಾನನ್ನು ಮುಟ್ಟುವ ರೀತಿ
ನೀ ನೋಡುತ್ತಿರು ದೂರದಿಂದಲೇ
ಅನುಭವಕ್ಕೆ ಬಾರದ ಸ್ಥಿತಿ ನಿನ್ನದು

ಹೋಗುವಾಗ ಹೇಳಿ ಹೋಗದ
ನಿನಗೇಕೆ ನನ್ನ ಕಳಕಳಿ

ಮರೆತಿರುವೆನು ಎಲ್ಲವನ್ನು
ಎಲ್ಲವನ್ನು ಅಂದರೆ ಎಲ್ಲವನ್ನು
ನಿನ್ನ ನಗುವನ್ನು , ಜೊತೆಗೆ ನನ್ನದನ್ನು
ನಿನ್ನ ಅಕ್ಕರೆಯನ್ನು
ಕಾಫಿಗೆ ನೀ ಹಾಕುತ್ತಿದ್ದ ಜಾಸ್ತಿ ಸಕ್ಕರೆಯನ್ನು

ಮರೆತಿರುವೆನು ನಿನ್ನ ರಂಗೋಲಿಯ
ಮುಂಜಾವಿನ ಚೆಲುವನ್ನು

ಮರೆತಿರುವೆನು ನಿನ್ನ
ಮೋಹಿಸುವ ಪರಿಯನ್ನು

ಎಲ್ಲಾ ಮರೆತಿರುವೆನೆಂದು
ನಿನಗೆ ಹೇಳಲು
ಮೊತ್ತಮ್ಮೆ ಬಿಚ್ಚಿ ಕುಂತಿರುವೆನು
ಮರೆತ ಎಲ್ಲಾ ನೆನಪುಗಳನ್ನು

Feb 20, 2010

ಕಾಗದ ಬಂತು ಕಾಗದ

ತೀರ್ಥರೂಪು ತಂದೆಯವರಿಗೆ, ಮಾತೃಶ್ರೀ ತಾಯಿಯವರಿಗೆ, ಶ್ರೀ, ಕ್ಷೇಮ, ಪ್ರೀತಿಯ ತಂಗಿಗೆ, ಯಾಕ್ರೀ ನೆನಪು ಬರ್ತ ಇಲ್ವಾ , ಸಾಮಾನ್ಯವಾಗಿ ೧೯೮೫ ರ ನಂತರ ಹುಟ್ಟಿರುವರಿಗೆ ಈ ಪದಗಳು ಲ್ಯಾಟಿನ್ ತರ ಕೆಳಿಸ್ತವೆ, ಯಾಕಂದ್ರೆ ೯೦ ರ ಹೊತ್ತಿಗೆಲ್ಲ ಇಮೇಲ್ ಬಂದು ಕೂತಿತ್ತು, ಅಲ್ಲಿಂದ ಮುಂದಕ್ಕೆ ನಿಮಗೆಲ್ಲ ಗೊತ್ತೇ ಇದೆ. ಈ ಕಾಗದ ಅನೋದು ಎಷ್ಟೊಂದು ಹಳೆಯ ಸಂಸ್ಕೃತಿಯ ಪ್ರತೀಕವಾಗಿ ನಮ್ಮೊಂದಿಗಿತಲ್ವ , ಎಲ್ಲಿಗೆ ಹೋಯ್ತು ಆ ಚಡಪಡಿಕೆ ಆ ಕಾತುರ , ಕಾಗದ ಬಂದೊಡನೆ ಯಾರಿಂದ ಬಂದಿದೆ ಅನ್ನೋ ಕುತೂಹಲ, ಇಂತಿ ನಿಮ್ಮ ಪ್ರೀತಿಯ, ಎಲ್ಲೋಯ್ತ್ರಿ ಈ ಪದಗಳೆಲ್ಲ , ನೀವು ಇವತ್ತು ಕಲಿಸೋ ಇಮೈಲ್ನಲ್ಲಿ ಇದ್ನೆಲ್ಲ ಬರೀತೀರೇನ್ರಿ . ಒಂದೇ ಒಂದು ಸಾರಿ ವಾಪಾಸ್ ಹೋಗಣ ಕಣ್ರೀ, ಒಂದೇ ಒಂದ್ಸಲ ಪ್ರಯತ್ನ ಪಡೋಣ, ಮರೆತುಬಿಡ್ರಿ ಈ ಇಮೇಲ್ , ಸಂಸ್, ಎಲ್ಲ ಮರೆಯೋಣ, ಒಂದೇ ಒಂದು ವಾರಕ್ಕಾಗಿ ಮರೆಯೋಣ. ಪೋಸ್ಟ್ ಆಫೀಸೆಗೋಗಿ ಒಂದ್ ೫ ಇನ್ಲ್ಯಾಂಡ್ ಲೆಟರ್ ತರೋಣ ಆಗ ನೋಡ್ರಿ ಮಜಾ, ಯಾರಿಗ ಬರೀಬೇಕು ಅನ್ನೋದೇ ದೊಡ್ಡ ದರ್ಮ ಸಂಕಟ ಅಂಗು ಇಂಗು ಮಾಡಿ ಒಂದ್ ೫ ಜನರ ಲಿಸ್ಟ್ ಮಾಡಿದ್ರಿ ಅಂತ ಇಟ್ಕೊಳ್ಳಿ , ಅವ್ರ ಅಂಚೆ ವಿಳಾಸ ಇದೆಯೇನ್ರಿ , ಮತ್ತೆ ಕಾಗದ ಎಲ್ಲಿಗೆ ಕಲಿಸೋದು, ಒಮ್ಮೆ ಯೋಚನೆ ಮಾಡಿ ಸ್ನೇಹಿತರೆ ಓಡುವ ಆತುರದಲ್ಲಿ ನಾವೆಷ್ಟು ಮರಿತಿದೇವೆ. ಬೇಡ ಸ್ವಲ್ಪ ನಮ್ಮ ಸ್ವಂತಿಕೆಯನ್ನು ಊಳಿಸಿಕೊಳ್ಳೋಣ, ಏನಾದ್ರು ಅಂದ್ಕೊಳ್ಳಿ ಈ ವಾರ ಗ್ಯಾರಂಟಿ ೫ ಪತ್ರ ಬರ್ದೇ ಬರೀತೀನಿ, ಒಮ್ಮೆ ಯೋಚಿಸಿ ನೋಡಿ ರಿಸೀವ್ ಮಾಡದೋರ ಕುತೂಹಲ ಹೆಂಗಿರುತ್ತೆ ಅಂತ. 
ಇಂತಿ ನಿಮ್ಮ ಶ್ರೇಯೋಭಿಲಾಷಿ 
"ವಿಹಾರಿ"

ಮರೆತು ಬಿಡು

ಮೌನದ ಕೊಂಡಿಯದು
ಮನಸ್ಸಿನ ಮಂಡಿಗೆಯದು
ಅಳುವಿಲ್ಲ ನಗುವಿಲ್ಲ
ಮಾತಂತೂ ಮೊದಲೇ ಇಲ್ಲ
ಹತ್ತಾಯ್ತು ಮತ್ತೆಐದು ಆಯಿತು
ಹದಿನೈದಕ್ಕೂ ಆರದ ಗಾಯದ ಮನಸ್ಸುಗಳು.
ಊಂಡು ಮಲಗುವ ಮುನ್ನ ಕಳಚಿದ್ದ ಕಗ್ಗಂಟು ಎಷ್ಟೋ
ಈಗೇಕೆ ಈ ಪರಿ
 ಉಣ್ಣಲು ಒಲ್ಲೆ, ಮಲಗಲು ಒಲ್ಲೆ,
ಬಿಚ್ಚಲು ಒಲ್ಲೆ ಮನದಾಳದ ಗಂಟ
ಮುಗಿದಿವೆ ಕ್ರಿಯೆಗಳು ಕರ್ಮಗಳು
ಮುಗಿಯುತ್ತಿವೆ ಸಾಂತ್ವನದ ನುಡಿಗಳು
ಮರೆಯುತ್ತಿವೆ ದೂರದ ಮನಸ್ಸುಗಳು
ಸಾವಿನ ತೇರಲ್ಲಿ ಯಾರದು ತಪ್ಪಿಲ್ಲ 
ಯಾರದು ಒಪ್ಪಿಲ್ಲ
ಅವನ ಆಜ್ಞೆಯಂತೆ ನಾನೊಂದು ಬೊಂಬೆ
ಇನ್ನಾದರೂ ಮರೆಯೆ
ನನ್ನೀ ಸಾವಿನ ನೋವ.

"ವಿಹಾರಿ"